ಜಯಲಕ್ಷ್ಮೀ ಶ್ರೀನಿವಾಸನ್ -
	ಇಪ್ಪತ್ತನೆಯ ಶತಮಾನದ ಮೊದಲಲ್ಲಿ ಬರೆಯಲಾರಂಭಿಸಿದ ಹಿರಿಯ ಲೇಖಕಿಯರಲ್ಲಿ ಜಯಲಕ್ಷ್ಮೀ ಶ್ರೀನಿವಾಸನ್ ಪ್ರಮುಖರು. ತಮಿಳು ಮಾತೃಭಾಷೆಯಾದರೂ ಪತಿಯ ನೌಕರಿಯ ಕಾರಣದಿಂದಾಗಿ ಬಹುಕಾಲ ಬೆಂಗಳೂರಿನಲ್ಲೇ ನೆಲಸಿದ್ದರಿಂದ ಕನ್ನಡವನ್ನು ಚೆನ್ನಾಗಿ ಕಲಿತು ಕನ್ನಡದಲ್ಲೇ ಕಥೆ ಕಾದಂಬರಿ ಬರೆಯುವಂತಾದರು. ಕನ್ನಡದ ಶ್ರೇಷ್ಠ ಸಾಹಿತಿ ಡಾ|| ಮಾಸ್ತಿ ವೆಂಕಟೇಶ್ ಅಯ್ಯಂಗಾರ್ಯರು ಸಂಪಾದಕರಾಗಿದ್ದ, ಜೀವನ ಪತ್ರಿಕೆಯಲ್ಲಿ ಇವರ ಮೊದಲ ಬರಹಗಳು ಪ್ರಕಟವಾದವು. ಆ ಪ್ರೋತ್ಸಾಹದಿಂದ ಪ್ರೇರಿತರಾಗಿ ಬರವಣಿಗೆಯನ್ನು ಮುಂದುವರಿಸಿದರು. ಅಂದಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಇವರ ಕಥೆಗಳು, ಅನುವಾದಿತ ಕಥೆಗಳೂ ಪ್ರಕಟವಾಗ ತೊಡಗಿದವು. ಜಯಲಕ್ಷ್ಮಿ ಅವರು ಕನ್ನಡ, ತಮಿಳು, ಇಂಗ್ಲೀಷ್, ಹಿಂದಿ ಹೀಗೆ ಬಹುಭಾಷಾ ಪರಿಣತರು. ತಮಿಳಿನಲ್ಲೂ ಬರೆಯುತ್ತಿದ್ದರು. ತಮಿಳಿನಿಂದ ಅನೇಕ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಸರೋಜ ಇವರ ಕಾವ್ಯನಾಮ. ಆದರೆ ನಿಜನಾಮ ಜಯಲಕ್ಷ್ಮೀ ಶ್ರೀನಿವಾಸನ್ ಎನ್ನುವುದೇ ಹೆಚ್ಚು ಪ್ರಸಿದ್ಧವಾಯಿತು. ಪರಿಣಿತ ಮುಂತಾದ ಕಾದಂಬರಿಗಳನ್ನು, ಮೊಗ್ಗು ಮೊದಲಾದ ಕಥಾಸಂಕಲಗಳನ್ನು ರಚಿಸಿರುವುದಲ್ಲದೆ, ಮಕ್ಕಳಿಗಾಗಿಯೇ ಅನೇಕ ಕಥೆಗಳನ್ನು ಬರೆದಿದ್ದಾರೆ. ಗೃಹ ವಿಜ್ಞಾನದಲ್ಲಿ ಹೆಚ್ಚಿನ ಆಸಕ್ತಿ ಇದ್ದುದರಿಂದ ಅದಕ್ಕೆ ಸಂಬಂಧಿಸಿದ “ವೈಭವದ ಮನೆ” ಎಂಬ ಕೃತಿಯನ್ನು, ಸರೋಜ ನಳಿನಿ ಎನ್ನುವ ಜೀವನ ಚರಿತ್ರೆಯನ್ನು ಬರೆದಿದ್ದಾರೆ.

	ದೇಶ ಸುತ್ತು ಕೋಶ ಓದು ಎನ್ನುವ ನಾಣ್ಣುಡಿಯಂತೆ ಜಯಲಕ್ಷ್ಮಿಯವರು ವಿದೇಶಗಳಲ್ಲಿ ಪ್ರವಾಸ ಮಾಡಿದ್ದಾರೆ. ದಕ್ಷಿಣ ಆಫ್ರಿಕ, ಕೆನಡ, ಇಂಗ್ಲೆಂಡ್, ಫ್ರಾನ್ಸ್ ದೇಶಗಳಿಗೆ ಹೋಗಿ ಬಂದಿದ್ದಾರೆ. ಇವರ ಕೃತಿಗಳಲ್ಲಿ ಆ ಪ್ರವಾಸದ ಪ್ರಭಾವ ಕಾಣಬಹುದು.

	ಈ ಹಿರಿಯ ಲೇಖಕಿಯಿಂದ ರಚಿತವಾದ ಪುಸ್ತಕಗಳು ಅನೇಕ. ಈ ಸಾಧನೆಯ ಫಲವಾಗಿ ಇವರಿಗೆ ಅನೇಕ ಪ್ರಶಸ್ತಿಗಳೂ ಸಂದಿವೆ. ಅವುಗಳಲಿ ಮುಖ್ಯವಾದವುಗಳು; ತಮಿಳು ನಾಡಿನ ವಿದ್ಯಾರತ್ನ ಪ್ರಶಸ್ತಿ, 1971ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದಿವಂಗತ ಚಂದ್ರಕಲಾ ಅವರು ಸ್ಥಾಪಿಸಿರುವ ಸ್ವರ-ಲಿಪಿ ಪ್ರತಿಷ್ಠಾನದ ಲಿಪಿ ಪ್ರಜ್ಞೆ ಪ್ರಶಸ್ತಿ ಮುಂತಾದವುಗಳು. 1965ರಲ್ಲಿ ನಡೆದ ಅಖಿಲ ಭಾರತ ಲೇಖಕಿಯರ ಸಮ್ಮೇಳನದಲ್ಲಿ ಪ್ರತಿನಿಧಿಯಾಗಿ ಭಾಗವಹಿಸಿದ್ದರು.

	ಇಳಿ ವಯಸ್ಸಿನಲ್ಲಿ ಕಾಯಿಲೆಯಿಂದ ನರಳುತ್ತಿದ್ದಾಗ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಯನ್ನು (2000) ಇವರ ಮನೆಗೇ ಬಂದು ನೀಡಲಾಯಿತು.

	ಜಯಲಕ್ಷ್ಮೀ ಶ್ರೀನಿವಾಸನ್ ಅವರ ಮೂರು ಮಕ್ಕಳೂ ಪ್ರತಿಭಾವಂತರು (ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಮಗ) ಮಗಳು ಮಾಲತಿ ಸುಬ್ರಹ್ಮಣ್ಯಂ ಕೂಡ ಒಳ್ಳೆಯ ಲೇಖಕಿ ದೌರ್ಭಾಗ್ಯದಿಂದ ಚಿಕ್ಕವಯಸ್ಸಿನಲ್ಲೇ ತೀರಿಕೊಂಡರು.	
(ಎಚ್.ಎಸ್.ಪಾರ್ವತಿ)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ